ಕಂಬಿಯ ಪದಗಳು : ಕಂಬಿಯ ಅಯ್ಯಗಳು ಮಾರ್ಗಾಯಾಸ ಪರಿಹಾರಾರ್ಥ ವಾಗಿ ಹಾಡುವ ದೇವರ ಪದಗಳು. ಅವರು ಹೊತ್ತುಕೊಂಡು ಹೋಗುತ್ತಿದ್ದ ಕಂಬಿ (ಕೋಲು), ಕಾವಡಿಗಳೇ (ನೆಲುವು) ಕಂಬಿಯ ಮಲ್ಲಯ್ಯನಾಗಿ ಪುಜೆಗೊಳ್ಳುತ್ತ ಬಂದಿವೆ. ಪುರಾತನ ಕಾಲದಿಂದಲೂ ನಡೆದುಬಂದಿರುವ ಜನಪದ ಸಂಪ್ರದಾಯಗಳಲ್ಲಿ ಇದೂ ಒಂದು. ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರು ಯಾತ್ರೆಯ ಸಂದರ್ಭದಲ್ಲಿ ಕಂಬಿಯ ಪದಗಳನ್ನು ಮೇಳದೊಡನೆ ಹಾಡುವರು.

ಐದಾರು ಮೊಳ ಬಿದಿರಿನ ಕಂಬಿಯ ಎರಡೂ ತುದಿಗಳಿಗೆ ಮೂರು ಮೊಳ ಎತ್ತರವಿರುವ ಎರಡು ಟಿಸಿಲುಗಾಲುಗಳನ್ನು ಜೋಡಿಸಿ ಅವುಗಳಿಗೆ ಕಾಯಕ ಗಂಟೆಗಳನ್ನು ಕಟ್ಟುವರು. ಈ ಟಿಸಿಲುಗಳು ಕೂಡುವ ಮುಂಭಾಗದಲ್ಲಿ ನಂದಿಯನ್ನು ಸ್ಥಾಪಿಸಿ ಅದಕ್ಕೆ ಕಳಸವನ್ನು ಕೂಡಿಸುವರು. ಇದಕ್ಕೆ ಗಲ್ಲೀಪಗಳನ್ನು ಹಾಕಿ ಕಂಬಿಗೆ ಪತಾಕೆಗಳನ್ನು ಸುತ್ತಿ ಅಲ್ಲಲ್ಲಿ ವಿಭೂತಿಯನ್ನು ಹಚ್ಚುವರು. ಎರಡೂ ತುದಿಗಳಿಗೆ ಕಾವಡಿಗಳನ್ನು ಕಟ್ಟಿ ಅವುಗಳಲ್ಲಿ ತಮಗೆ ಬೇಕಾಗುವ ಹಾದಿಯ ಬುತ್ತಿಯನ್ನೂ ಪ್ರವಾಸದ ಸಾಮಗ್ರಿಗಳನ್ನೂ ಇಟ್ಟುಕೊಳ್ಳುವರು. ಈ ಜನ ಉದ್ದಕ್ಕೂ ಹಾಡುವ ಪದಗಳು ಮಲ್ಲಯ್ಯನ ಹಾಗೂ ಅವನ ಭಕ್ತರ ಮಹಿಮೆಯನ್ನು ಒಳಗೊಂಡಿರುತ್ತವೆ. ಇವು ಹೆಚ್ಚಾಗಿ ದ್ವಿಪದಿಗಳು.

ಪ್ರಧಾನವಾಗಿ ಯಾತ್ರೆಯ ಪದಗಳ ಉದ್ದೇಶ ತಮ್ಮ ಆರಾಧ್ಯ ದೈವವನ್ನು ಹೆಜ್ಜೆಹೆಜ್ಜೆಗೂ ಕೊಂಡಾಡುವುದೇ ಎನ್ನಬಹುದಾದರೂ ನೂರಾರೂ ಮೈಲಿಗಳ ಯಾತ್ರೆಯಲ್ಲಿ ಹಾಡಿನ ಆವಶ್ಯಕತೆ ಮತ್ತೊಂದು ರೀತಿಯಲ್ಲಿಯೂ ಕಂಡುಬರುತ್ತದೆ. ಕಾಡುಮೇಡುಗಳಲ್ಲಿ ಅನೇಕ ದಿನ ಯಾತ್ರೆ ಹೋಗುವಾಗ ಯಾವ ವಾಹನ ಸಂಚಾರವೂ ಇಲ್ಲದ ಕಾಲದಲ್ಲಿ ಇಂಥ ಹಾಡುಗಳು ಭಕ್ತಿಯ ಆವೇಶವನ್ನು ತುಂಬಿ ಯಾತ್ರೆಯಲ್ಲಿ ಶ್ರದ್ಧೆಯನ್ನೂ ನಿಷ್ಠೆಯನ್ನೂ ಮೂಡಿಸುತ್ತಿದ್ದುವು. ಮಾರ್ಗಾಯಾಸವನ್ನು ಕುಗ್ಗಿಸುತ್ತಿದ್ದವು. ಮೂಡುಮಲೆ ಮಾದಯ್ಯನ ಗಿರಿಯ ಯಾತ್ರೆ, ತಿರುಪತಿಕ್ಷೇತ್ರದ ಯಾತ್ರೆ, ಚುಂಚನಗಿರಿಯ ಯಾತ್ರೆ, ಶ್ರೀಶೈಲದ ಯಾತ್ರೆಗಳು ಅತ್ಯುತ್ತಮ ಯಾತ್ರೆಯ ಪದಗಳನ್ನು ಒದಗಿಸುತ್ತವೆ.  
ದಕ್ಷಿಣ ಭಾರತದ ಎಲ್ಲ ಕಡೆಗಳಲ್ಲೂ ಶ್ರೀಶೈಲಕ್ಕೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ಅಪಾರವಾಗಿದೆ. ಶಿವರಾತ್ರಿ ಹಾಗೂ ಯುಗಾದಿಯಲ್ಲಿ ಪ್ರತಿವರ್ಷವೂ ಜರುಗುವ ರಥೋತ್ಸವಕ್ಕೆ ಸಹಸ್ರಾರು ಮಂದಿ ಭಕ್ತರು ಕಲೆಯುತ್ತಾರೆ.

ಪುರ್ವಕಾಲದಲ್ಲಿ ದಟ್ಟವಾದ ಅರಣ್ಯಪ್ರದೇಶದಿಂದ ಸುತ್ತುವರಿದಿದ್ದ ಶ್ರೀಶೈಲ ಕ್ಷೇತ್ರಕ್ಕೆ ಎಲ್ಲ ಭಕ್ತರು ದೂರ ದೂರದಿಂದ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಗಿರಿಗೆ ಹೋಗುವ ಅಯ್ಯಗಳ ಜೊತೆ ತಮ್ಮ ಹರಕೆಯನ್ನು ಶ್ರೀಮಲ್ಲಿಕಾರ್ಜುನನ ಪದತಲಕ್ಕೆ ಮುಟ್ಟಿಸಲು ಕಳಿಸುತ್ತಿದ್ದರು. ಈ ಅಯ್ಯಗಳು ಕಂಬಿಯನ್ನು ಹೊತ್ತು ಹೋಗುವಾಗ ಅನೇಕ ಊರುಗಳ ಮೂಲಕ ಹಾದುಹೋಗುತ್ತಿದ್ದರು.
ಕಂಬಿಯ ಅಯ್ಯನವರಿಗೆ ಯಾತ್ರೆಯ ಉದ್ದಕ್ಕೂ ಜನರು ಆದರದ ಸತ್ಕಾರ ಏರ್ಪಡಿಸುತ್ತಿದ್ದರು; ಯಾತ್ರೆಯಿಂದ ಹಿಂತಿರುಗುವಾಗ ಇವರ ದರ್ಶನಕ್ಕೆ ಅಷ್ಟೇ ಸಂಭ್ರಮದಿಂದ ಕಾದಿರುತ್ತಿದ್ದರು. ತಮ್ಮ ಕಂಬಿಯಲ್ಲೇ ಮಲ್ಲಯ್ಯ ನೆಲೆಸಿ ಗಿರಿಗೆ ಸುರಕ್ಷಿತವಾಗಿ ತಮ್ಮನ್ನು ಕರೆದೊಯ್ದನೆಂದು ಈ ಭಕ್ತರ ನಂಬಿಕೆ, ಕಂಬಿಯ ಮಲ್ಲಯ್ಯ ಎಂಬ ಹೆಸರು ಬಂದದ್ದು ಹೀಗೆ. ಕಂಬಿಯ ಅಯ್ಯಗಳ ಬಗ್ಗೆ ಸಂಶೋಧನೆಯನ್ನು ನಡೆಸಿ, ಅವರ ಸಾಹಿತ್ಯವನ್ನೆಲ್ಲ ಗದ್ದಗೀಮಠರು ಸಮಗ್ರವಾಗಿ ಸಂಗ್ರಹಿಸಿದ್ದಾರೆ.

ಇಂಥ ಕಂಬಿಗಳನ್ನು ಹೊತ್ತ ಅಯ್ಯಗಳು ಹರಕೆಯನ್ನು ಒಯ್ಯುವ ಮೂಲಕ ಮಾಡುವ ಸೇವೆಯನ್ನು ಕಂಬಿಯ ಕಾಯಕ ಎನ್ನುತ್ತಾರೆ. ಆ ಅಯ್ಯಗಳಿಗೆ ಕಾವಡಿ ಅಯ್ಯಗಳು ಎಂಬ ಮತ್ತೊಂದು ಹೆಸರೂ ಇದೆ. ಈಗಲೂ ದೊಡ್ಡ ದೊಡ್ಡ ಶ್ರೀಮಂತರು ತಮ್ಮ ಮನೆಗಳಲ್ಲಿ ಕಂಬಿಗಳನ್ನಿಟ್ಟು ವರ್ಷಕ್ಕೊಂದು ಬಾರಿ ಹಣ ನೀಡಿ ಕಂಬಿಯ ಅಯ್ಯಗಳನ್ನು ಶ್ರೀಶೈಲಕ್ಕೆ ಕಳಿಸುತ್ತಾರೆ.

ಊರಿಗೆ ಮರಳಿದ ಕಂಬಿಯ ಅಯ್ಯಗಳು ಪುಜೆಯನ್ನು ನಡೆಸಿ ಮಲ್ಲಿಕಾರ್ಜುನನ ಲೀಲೆಗಳನ್ನು ಕೊಂಡಾಡುವರು; ಹಿಮ್ಮೇಳ ಮುಮ್ಮೇಳಗಳೊಡನೆ ರಾಗವೆತ್ತಿ ಹಾಡುವರು.

ಮಲ್ಲಯ್ಯ ಮಲ್ಲಯ್ಯ ಸಿರಿಗಿರಿ ಮಲ್ಲಯ್ಯನ ನೋಡುವ ಬನ್ನಿ |
ಎಲ್ಲಾ ದೇವರಿಗೆ ಒಡೆಯಾ ಬಲ್ಲಿದನೋ ಚೆನ್ನಮಲ್ಲ ||

ಹೀಗೆ ಪಲ್ಲವಿಯೊಡನೆ ಜೀವನದ ಸಂದೇಶವನ್ನು ಸಾರುವ ಹಾಡನ್ನು ಆರಂಭಿಸಿ ಗಂಡಹೆಂಡಿರ ಸಾಮರಸ್ಯ, ಬದುಕಿನ ಆದರ್ಶಗಳನ್ನು ಬಿತ್ತರಿಸುವರು.

ಕಂಬಿಯ ಸಂಪ್ರದಾಯ ತುಂಬ ಪ್ರಾಚೀನವಾದುದೆಂದು ಅನೇಕ ಆಧಾರಗಳಿಂದ ಸಾಧಿಸಲು ವಿದ್ವಾಂಸರು ಪ್ರಯತ್ನಿಸಿದ್ದಾರೆ. ಬಸವೇಶ್ವರರಿಗೂ ಪುರ್ವದ, ಐತಿಹಾಸಿಕ ವ್ಯಕ್ತಿಯೆಂದು ನಂಬಲಾದ ಗೊಲ್ಲಾಳ, ಇಳಿಹಾಳ ಬೊಮ್ಮಯ್ಯ ಮುಂತಾದವರ ಕಥೆಗಳಲ್ಲಿ ಕಂಬಿಯ ಅಯ್ಯಗಳ ಯಾತ್ರೆಯ ಪ್ರಸ್ತಾಪ ಬರುತ್ತದೆ. ಆ ಸಂಬಂಧದ ಜನಪದ ಗೀತೆಗಳು ಲಭ್ಯವಾಗಿವೆ. ಗೊಲ್ಲಾಳನ ಕಥೆಯಲ್ಲಂತೂ ಕಾವಡಿ ಹೊತ್ತ ಜಂಗಮನ ವರ್ಣನೆಯೇ ಬರುತ್ತದೆ. ಕಂಬಿಯನ್ನು ಕುರಿತ ಜನಪದ ಗೀತೆಗಳೂ ಲಭ್ಯವಾಗುತ್ತವೆ :

ಮೇಲು ಗುಡಿಯ ಶಿಖರದ ಒಡೆಯ
ಕೋಲು ಕಡಿದು ಕೈಯಲ್ಲಿ ಕೊಟ್ಟ
ಕಾಲು ಜಾರಿತು ಕೋಲು ಮುರಿಯಿತು
ಬಿಂದಿಗಿ ಒಡೆಯಿತು ಮಲ್ಲಯ್ಯ  
ಕಂಬಿಯ ಹೊತ್ತು ಬಿಂದಿಗಿ ಒಡೆದು
ಕುಂಬಾರನ ಮನೆ ಎಲ್ಲೆಂದ
ಕುಂಬಾರ ಗುಂಡನ ಭಕ್ತಿಯ ಕೇಳಿ
ಶಂಭುಶಂಕರ ಮಾದೇವ
ಕಂಬಿ ಕಾವಡಿ ನಂದಿಕೋಲು
ಮುಂಡಾಡುವ ಪಾತ ಮ್ಯಾಳ
ಸಾಲ ದೀವಟಿಗೆ ಮಲಬಾರಿ
ಹೊಯ್ದಾಡು ಪರಿಗಳ ನೋಡ
(ಗದ್ದಗೀಮಠ ಅವರ ಸಂಕಲನ)

ಕಂಬಿಯನ್ನು ಕರುಣಿಸಿದವ ಮೇಲುಗುಡಿಯ ಶಿಖರದ ಒಡೆಯ ಮಲ್ಲಿಕಾರ್ಜುನ. ಅಷ್ಟು ಪವಿತ್ರವಾದ ಸಾಧನವದು.
ಕಂಬಿಯ ಪದಗಳೆಲ್ಲವೂ ಮಲ್ಲಯ್ಯನನ್ನು ನೆನೆದು ಹಾಡಿದ ಸುಂದರ ಗೀತೆಗಳು.

ಉದಿಯದಲೆದ್ದು ನೆನೆ ಮನವೆ ಮದನಾರಿ ಶಿವಶರಣರ
ಕದಳಿಬನದ ಒಡೆಯನ ನೆನೆದೆ ಪದವಿಕಾರ ಚೆನ್ನಮಲ್ಲ
ಹೊತ್ತಿಲೆದ್ದು ಗುರುವಿನ ಪಾದವ ಅರತಿಯಲ್ಲಿ ನೀನೆನೆಮನವೆ
ಮಹಾಮಲ್ಲೇಶನ ಪಾದವ ನೆನೆದರೆ ಚಿತ್ತದ ಪಾಪ ಪರಿಹಾರ

ಭಕ್ತಿ ತನ್ಮಯರಾಗಿ ಕಂಬಿಯ ಅಯ್ಯಗಳು ತಮ್ಮ ನೆಚ್ಚಿನ ದೈವ ಮಲ್ಲಯ್ಯನನ್ನು ಕುರಿತು ಹಾಡುತ್ತ ಸಾಗುತ್ತಾರೆ. ಅವರನ್ನು ಹಿಂಬಾಲಿಸಿ ಹೊರಟ ಭಕ್ತರೂ ಈ ಹಾಡಿನಿಂದ ಸ್ಫೂರ್ತಿಗೊಳ್ಳುತ್ತಾರೆ.

ಕಂಬಿಯ ಪದಗಳು ಎರಡೆರಡು ಸಾಲಿನ ವಿಶಿಷ್ಟ ಧಾಟಿಯ ಪದ್ಯಗಳಂತೆ ಕಂಡರೂ ಅವೆಲ್ಲವೂ ಹೇರಳವಾಗಿ ದೊರೆಯುವ ಜನಪದ ತ್ರಿಪದಿಗಳ ಮುರಿದ ರೂಪದಂತೆ ಕಾಣುತ್ತವೆ. ಕೆಲವನ್ನು ಸುಲಭವಾಗಿಯೇ ತ್ರಿಪದಿಗಳೆಂದು ಹೇಳಿ ಬಿಡಬಹುದು.

ಎತ್ತು ಕುಂಟಲಿ ಸಹಿತವಾಗಿ ಮುತ್ತೈದೇರು ಮೊದಲಾಗಿ
ಎತ್ತಿದ ಕೂಸು ಸಮನಾಗಿ ಬಂದರೆ ಒಪ್ಪಿಸಿಕೋ ನಿಮ್ಮ ಹರಕೆಗಳ ||
ಎತ್ತು ಕುಂಟಲಿ ಸಹಿತವಾಗಿ ಮುತ್ತೈದೇರು ಮೊದಲಾಗಿ
ಎತ್ತಿದ ಕೂಸು ಸಮನಾಗಿ | ಬಂದರೆ
ಒಪ್ಪಿಸಿಕೊ ನಿಮ್ಮ ಹರಕೆಗಳ

ಕನ್ನಡದ ಜನಪದ ಗೀತೆಯಲ್ಲಿ ಎಲ್ಲ ದೈವಗಳಿಗೂ ಕ್ಷೇತ್ರಗಳಿಗೂ ಸಂಬಂಧಪಟ್ಟ ತ್ರಿಪದಿಗಳಲ್ಲೂ ಮಿಡಿದ ಹೃದಯ ಒಂದೇ, ಹರಿದ ಭಕ್ತಿರಸ ಒಂದೇ. ಕಂಬಿಯ ಪದಗಳೂ ಭಕ್ತರ ನಾನಾ ರೀತಿಯ ಹರಕೆ, ಹಂಬಲಗಳನ್ನು ಇತರ ಭಕ್ತಿಗೀತೆಗಳಂತೆಯೇ ಚಿತ್ರಿಸುತ್ತವೆ.

ಜಡೆಯ ಮಕ್ಕಳನೆತ್ತಿಕೊಂಡು ತಡೆಯದೆ ಬಂದೆ ಶಿವನೆ
ಒಡೆಯ ಚೆನ್ನ ಬಹುಳ ಮಲ್ಲ ಬಿಡಲಾರೆ ನಿಮ್ಮ ಪಾದಗಳ
(ಕಂಬಿಯ ಪದಗಳು)
ಒಕ್ಕಲು ಬತ್ತೀವಿ ಒಡೆಯ ಬಾಗಿಲು ತೆಗಿಯೊ
ತೊಟ್ಟಿಲು ತತ್ತೀವಿ ತೊಳಗಾಕೆ-ಭೈರುವ
ಶಿಶುವ ತತ್ತೀವಿ ಹೆಸರ್ಹೇಳೊ
(ಶ್ರೀ ಆದಿಚುಂಚನಗಿರಿ ಜನಪದ ಗೀತೆಗಳು)

ಕಂಬಿಯ ಅಯ್ಯಗಳ ಈ ಪದಗಳೂ ಬಹುಮಟ್ಟಿಗೆ ಸ್ತ್ರೀಯರು ಹಾಡುವ ತ್ರಿಪದಿಗಳಿಂದಲೇ ಬಂದುವು ಎಂಬುದಕ್ಕೆ ಮೇಲಿನ ನಿದರ್ಶನಗಳನ್ನು ಗಮನಿಸಬಹುದು. ಮಲ್ಲಯ್ಯನಿಗೆ ಸಂಬಂಧಿಸಿದ ಹಾಡುಗಳನ್ನು ಎಲ್ಲ ಜನಪದ ಮೂಲಗಳಿಂದಲೂ ಇವರು ಸಂಗ್ರಹಿಸಿಕೊಂಡಂತೆ ತೋರುತ್ತದೆ. ಏಕೆಂದರೆ ನಡುನಡುವೆ ನೀತಿ ಪ್ರಧಾನ, ಹಾಸ್ಯಪ್ರಧಾನ ಗೀತೆಗಳೂ ಕಾಣಿಸಿಕೊಳ್ಳುತ್ತವೆ. ಪುರುಷರು ಬಹುಶಃ ಬೇರೆ ಬೇರೆ ಸಂದರ್ಭಗಳಲ್ಲಿ ಹಾಡುವ ಪದಗಳೂ ಕಂಬಿ ಪದಗಳಾಗಿ ಸ್ವೀಕೃತವಾಗಿರಬಹುದು.

ಗಂಡಹೆಂಡಿರ ಮನವೆರಡಾದರ ತಪ್ಪದು ತಲೆದಂಡ ಮಲ್ಲಯ್ಯ
ಗಂಡಹೆಂಡಿರ ಮನವೊಂದಾದರ ನಂದಾದೀಪೊ ಮಲ್ಲಯ್ಯ (ನೀತಿ)
ಇಬ್ಬರು ಹೆಂಡರ ಕಾಟಕ್ಕಾಗಿ ಎದ್ದುಬಂದೆನೊ ಮಲ್ಲಯ್ಯ
ಇಬ್ಬರೊಳಗೆ ಒಬ್ಬಾಕಿ ಹೋದರ ಗುಗ್ಗಳ ಹೊರುವೆ ಮಲ್ಲಯ್ಯ (ಹಾಸ್ಯ)

ಧಾಟಿ ಮತ್ತು ವಸ್ತು ವಿನ್ಯಾಸದಲ್ಲಿ ಇಲ್ಲಿನ ಕೆಲವು ಹಾಡುಗಳು ಕೋಲಾಟದ ಗತ್ತಿಗೆ ಒಗ್ಗುತ್ತವೆ. ಗದ್ದಗೀಮಠರು ಸಂಗ್ರಹಿಸಿಕೊಟ್ಟಿರುವ ಕಂಬಿಯ ಹಾಡುಗಳಲ್ಲಿ ಹಲವು ಬಗೆಯ ವೈವಿಧ್ಯಮಯ ಹತ್ತು ಗೀತೆಗಳು ಕಾಣಬರುತ್ತವೆ. ಉರ್ದುಮಿಶ್ರಿತ ಕಂಬಿಯ ಹಾಡುಗಳು ಇಲ್ಲಿ ಗಮನಾರ್ಹ.  

ಬೇಬಿಸ್ಮಿಲ್ಲ ಬೇಬಿಸ್ಮಿಲ್ಲಾ ಲಗು ಬಾರೊ ಪರುವುತಮಲ್ಲ
ಕ್ಯಾಹೂವ ಆಯಿತು ಅಕ್ಕೇಲ ನಿಮ್ಮ ಹೊರ್ತು ಯಾರ್ಯಾರಿಲ್ಲ.

ಕಂಬಿಯ ಅಯ್ಯಗಳು ವಿಧರ್ಮೀಯರ ಕೈಯಿಂದ ಪಾರಾಗಿ ತಮ್ಮ ಯಾತ್ರೆಯನ್ನು ಸುಗಮಗೊಳಿಸಿಕೊಳ್ಳಲು ಇಂಥ ರಚನೆಗಳನ್ನು ಮಾಡಿಕೊಂಡಿರಬೇಕೆಂದು ಗದ್ದಗೀಮಠರು ಊಹಿಸುತ್ತಾರೆ. ತಮ್ಮನ್ನು ತಡೆದು ಪ್ರಶ್ನಿಸುವವರಿಗೆ ಉರ್ದುಮಿಶ್ರಿತ ಹಾಡುಗಳನ್ನು ಹೇಳಿ ಅವರ ಧರ್ಮದ ಬಗ್ಗೆ ತಮಗಿರುವ ಸಹಿಷ್ಣುತೆಯನ್ನು ಶ್ರುತಪಡಿಸಿ ಎಂಥ ಅಡಚಣೆಗಳಿಂದಲೂ ಪಾರಾಗಿಹೋಗುತ್ತಿದ್ದರು ಎಂಬ ಈ ಊಹೆ ಸಮರ್ಥನೀಯವಾಗಿದೆ.

ಬಿರುದಾವಳಿಗಳೂ ಇತರ ಬಗೆಯ ಹಾಡುಗಳೂ ಕಂಬಿಯ ಪದಗಳಲ್ಲಿ ಬರುತ್ತವೆ. ಇವುಗಳ ವ್ಯಾಪಕವಾದ ಸಂಗ್ರಹ, ಅಧ್ಯಯನ ಕನ್ನಡದಲ್ಲಿ ಇನ್ನೂ ಆಗಬೇಕಾಗಿದೆ.			(ಜೆ.ಎಸ್.ಪಿ.; ಸಿ.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ